I ಸದಾಶಿವ ಸಮಾರಂಭಾಂ ವ್ಯಾಸ ಶಂಕರ ಮಧ್ಯಮಾಂ
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಂ II

ಭಾರತ ೨೧ನೆ ಶತಮಾನದಲ್ಲಿ information technology ಕ್ಷೇತ್ರದಲ್ಲಿ ಮಹತ್ ಸಾಧನೆಗಾಗಿ ವಿಶ್ವ ಖ್ಯಾತಿಯನ್ನೇ ಪಡೆದಿದೆ. ಇದು ಇತ್ತೆಚಿನ ಕೆಲವು ದಶಕಗಳಲ್ಲಿ ಕಂಡು ಬಂದಂತಹ ಬೆಳವಣಿಗೆ ಯಾಗಿದ್ದರೆ, ಅನಾದಿ ಕಾಲದಿಂದಲೂ ತನ್ನ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಶ್ರೀಮಂತಿಕೆಯ ದೆಸಯಿಂದಾಗಿ ಇಡೀ ವಿಶ್ವಕ್ಕೆ 'ಸಾಂಸ್ಕೃತಿಕ ರಾಜಧಾನಿ' ಯಾಗಿದೆ ಅಂದರೆ ಅತಿಶಯೋಕ್ತಿ ಆಗಲಾರದು.
ದಕ್ಷಿಣ ಭಾರತದ ಕಲಾ ಪ್ರಕಾರಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಮುಖವಾದದ್ದು. ಶಾಸ್ತ್ರೀಯ ಸಂಗೀತ ಇಂದು ಹೆಮ್ಮರವಾಗಿ ಬೆಳೆದು ಗುರವ ಸ್ಥಾನವನ್ನ ಪಡೆದಿರುವ ಹಿನ್ನೆಲೆಯಲ್ಲಿ ನಮ್ಮ ನಾಡಿನ ಅನೇಕ ವಿದ್ವಾಂಸರು ಪ್ರಾತಃಸ್ಮರಣೀಯರು;ಇವರ ಕೊಡುಗೆ ಸ್ಮರಣಾರ್ಹ!
ಶ್ರೀ ಪುರಂದರದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತದ ಬುನಾದಿಯನ್ನಿಟ್ಟ ಪಿತಮಹರಾಗಿದ್ದರೆ; ಇದನ್ನ ಪೋಷಿಸಿ ಬೆಲಿಸಿ ಒಂದು ನಿರ್ದಿಷ್ಟ ಸ್ವರೂಪವನ್ನು ತಂದು ಕೊಟ್ಟಂಥ ಕೀರ್ತಿ ತ್ರಿಮೂರ್ತಿಗಳಿಗೆ ಸಲ್ಲತಕ್ಕದ್ದು. ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲೇ ಈ ಮೂವರು ಮಹನೀಯರ ಕೊಡುಗೆ 'ನ ಭೂತೋ ನ ಭವಿಷ್ಯತಿ'ಎಂಬ ನಾಣ್ಣುಡಿಯಂತೆ ಪ್ರಜ್ವಲಿಸುತ್ತಿದೆ.

ತ್ರಿಮೂರ್ತಿಗಳು ತಮ್ಮ ಅಮೂಲ್ಯ ಕೃತಿಗಳ ಕೊಡುಗೆಗಾಗಿ ದೇವತೆಗಳಂತೆಯೇ ಪೂಜಾರ್ಹರಾಗಿದ್ದರೆ. ಈ ಹಿನ್ನೆಲೆಯಲ್ಲಿ ಇವರ ಚರಿತ್ರೆಯ ಅಧ್ಯಯನ ಮಾಡಿದಾಗ, ಇವರು ಸಾಮಾನ್ಯ ಮನುಷ್ಯರಂತೆ ತಮ್ಮ ದಿನ ನಿತ್ಯದ ಜೀವನದಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿಯಾದರೂ ತಮ್ಮ ಸಾಧನೆಯಲ್ಲಿ ದೃಢೌವ್ರತರಾಗಿದ್ದರೆಂಬುದು ಗಮನಾರ್ಹ.


ಇನ್ನು ೨೦ನೆ ಶತಮಾನದ ಪ್ರಾರಂಭದ ಕೆಲವು ದಶಕಗಳಲ್ಲಿ ಅನೇಕ ಪ್ರತಿಭಾವಂತ ಮಹಿಳೆಯರ ಕಲಾ ಕೌಶಲ್ಯತೆ ಸೂಕ್ತ ಬೆಂಬಲ ಹಾಗು ಅವಕಾಶಗಳ ಕೊರೆತಯಿಂದಾಗಿ ಮನೆಯ ನಾಲ್ಕು ಗೋಡೆಗಳಲ್ಲಿಯೇ ನಶಿಸಿಹೋದಂತಿತ್ತು.



ಹೀಗಿರುವಾಗ ಬೆಂಗಳೂರು ಶ್ರೀಮತಿ ನಗರತ್ನಮ್ಮನವರು, ರುಕ್ಮಿಣಿ ದೇವಿ ಅರುಂಡೆಲ್, ಜನಪ್ರಿಯ ಸಂಗೀತ ವಿದೂಶಿಯರಾದ ಶ್ರೀಮತಿ ಎಂ ಎಸ್ ಸುಬ್ಬುಲಕ್ಷ್ಮಿ, ಶ್ರೀಮತಿ ಪಟ್ಟಮ್ಮಾಳ್, ಶ್ರೀಮತಿ ಎಂ ಎಲ್ ವಸಂತಕುಮಾರಿ - ಇವರ ಸಾಧನೆ ಸ್ತುತ್ಯರ್ಹವಾದದ್ದು. ಅದರಲ್ಲೂ ಸಮಾಜದ ನಿಮ್ನ ವರ್ಗದಲ್ಲಿ ಬೆಳೆದು ಬಂದ ಎಂ ಎಸ್ ಮುಂದೆ ಭಾರತರತ್ನರಾಗಿ ಖ್ಯಾತಿ ಪಡೆದದ್ದು ಶ್ಲಾಘನೀಯ!!
ಮೇಲ್ಕಂಡ ಎರಡೂ ನಿದರ್ಶನಗಳ ತಾತ್ಪರ್ಯವೇನೆಂದರೆ ಯುವ ಕಲಾವಿದರು ಜೀವನದಲ್ಲಿ ಬರುವ ಅನಾನುಕೂಲತೆಗಳನ್ನು ಧೈರ್ಯವಾಗಿ ಎದುರಿಸಿ ತಮ್ಮ ಸಾಧನೆಯನ್ನು ಮುಂದುವರೆಸುವಲ್ಲಿ ಯಶಸ್ಸು ಖಂಡಿತ.
ಇಂದಿನ ಯುವ ಪೀಳಿಗೆಯಲ್ಲಿ ಆಸಕ್ತಿ ಶ್ರದ್ಧೆ ಉತ್ಸಾಹಗಳು ನಿರೀಕ್ಷೆಯನ್ನು ಮೀರುವಷ್ಟು ಕಾಣಬಹುದು. ಅನೇಕ ಯುವ ಕಲಾವಿದರು ವೃತ್ತಿ - ಪ್ರವೃತ್ತಿ ಗಳಲ್ಲೆರಡೂ ಯಶಸ್ಸಿನ ಸಾಧನೆ ಮಾಡಿದ್ದಾರೆ. ಇನ್ನು ಶಾಸ್ತ್ರೀಯ ಸಂಗೀತದ ಗುಣಮಟ್ಟವನ್ನು ಕಲಾವಿದರು ಜವಾಬ್ದಾರಿ ಇಂದ ನಿರ್ವಹಿಸಬೇಕಾಗಿದೆ. ಈಗಾಗಲೇ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯದ ಪಾತ್ರ ಗೌಣವಾಗಿರಬೇಕೆ ಅಥವಾ ಪ್ರಧಾನವಾಗಿರಬೇಕೆ ಎಂಬುರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
ಈ ಅಂಶವನ್ನು ಪ್ರಸ್ತುತ ಲೇಖನದ ವ್ಯಾಪ್ತಿ ಇಂದ ಹೊರಗಿಟ್ಟು ನಾವು ಗಮನಿಸಬೇಕಾದ ವಿಚಾರವೇನೆಂದರೆ - ಒಬ್ಬ ವಾಗ್ಗೆಯಕಾರರ ರಚನೆಯನ್ನು ಪ್ರಸ್ತುತ ಪಡಿಸುವಾಗ, ಆ ಕೃತಿಯ ಸ್ವರೂಪಕ್ಕೆ ಚ್ಯುತಿ ಬಾರದಂತೆ ಕಲಾವಿದರು ಎಚ್ಚರಿಕೆಯನ್ನು ವಹಿಸಬೇಕು. ಸರಳವಾಗಿ ಹೇಳುವದಾದರೆ, ಕಲಾವಿದರು ಸಾಹಿತ್ಯ ಶುದ್ಧಿ, ಅಲ್ಪ-ಪ್ರಾಣ, ಮಹ-ಪ್ರಾಣ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ರೀತಿಯಾಗಿ ಅರ್ಥಪೂರ್ಣವಾಗಿ ಕೃತಿ ನಿರೂಪಣೆ ಮಾಡಿದಾಗ ಅದರಿಂದ ಸಿಗುವ ಆನಂದಕ್ಕೆ ಸಾಟಿಯೇ ಇಲ್ಲ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಯಲ್ಲಿ ಯುವ ಕಲಾವಿದರು ಸಂಘಟಿತರಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದು ಅವಶ್ಯಕವಾಗಿದೆ.
ಸಮಾಜದಲ್ಲಿ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂದು ಶಾಲಾ ಕಾಲೇಜುಗಳಲ್ಲಿ 'ಮೌಲ್ಯಾಧಾರಿತ ವಿದ್ಯಾಭ್ಯಾಸದ' ಬಗ್ಗೆ (value based education system) ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪುರಂದರದಾಸ ಮೊದಲಾದ ಹರಿದಾಸರು ನಮಗೆ ದಾರಿದೀಪವಾಗಬೇಕು. ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಪಡೆಸಲು ಸಂಗೀತಕ್ಕಿಂತ ಮಿಗಿಲಾದ ಮಾಧ್ಯಮ ಉಂಟೆ?!
ಪ್ರೀತಿ ಸೌಹಾರ್ದತೆಗಳಿಂದ ತುಂಬಿದ ಸುಂದರ ಸಮಾಜದ ನಿರ್ಮಾಣಕ್ಕಾಗಿ ಯುವ ಕಲಾವಿದರು ಸಂಗೀತದ ಮಾಧ್ಯಮದಿಂದ ಹೆಚ್ಚು ಹೆಚ್ಚಾಗಿ ಕ್ರಿಯಾಶೀಳರಾಗಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತದ ಭವಿಷ್ಯ ಸೂರ್ಯನ ಉಜ್ವಲ ಪ್ರಕಾಶದಂತೆ ಹೊಳೆಯಲಿ; ಚಂದ್ರನ ತಂಪಾದ ಕಿರಣಗಳಂತೆ ಜನಮನದಲ್ಲಿ ನೆಲೆಸಲಿ ಎಂದು ಹಾರೈಸುತ್ತೇನೆ.